ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನಾ ಕಾರ್ಯಕ್ರಮ ನಡೆಯಿತು.
"ನಾಯಕತ್ವ ಎಂಬುದು ಅಧಿಕಾರವಲ್ಲ, ಅದು ಹೊಣೆಗಾರಿಕೆ" ಎಂಬ ಸಂದೇಶದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಹೋಲಿ ಏಂಜಲ್ಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಫ್ಲೇವಿಯಾ ಕ್ರಾಸ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಯಕತ್ವದ ಗುಣಗಳು, ಶಿಸ್ತು ಮತ್ತು ಹೊಣೆಗಾರಿಕೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಶಾಲಾ ಮಂತ್ರಿಮಂಡಲದ ಮುಖ್ಯಮಂತ್ರಿಯಾಗಿ ಫರಾ ನಫೀಸ್ ಹಾಗೂ ಉಪಮುಖ್ಯಮಂತ್ರಿಯಾಗಿ ಸಾನ್ಯ ಎಸ್. ಪೂಜಾರಿ ಪ್ರಮಾಣವಚನ ಸ್ವೀಕರಿಸಿದರು. ವಿವಿಧ ವಿಭಾಗಗಳ ಮಂತ್ರಿಗಳು ಸಹ ಪ್ರಮಾಣವಚನ ಸ್ವೀಕರಿಸಿ ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಂಡರು. ಮುಖ್ಯೋಪಾಧ್ಯಾಯಿನಿ ಬಿಂದು ಮ್ಯಾಕ್ಸಿಂ ಡಿಸೋಜಾ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಧುರ ಜೈನ್ ನಿರೂಪಿಸಿದರು.