ಮೂಡುಬಿದಿರೆ: ಮಳೆಗಾಲದಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿ ಬೀಳುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಸಿಬ್ಬಂದಿ ಕೊರತೆಯಿಂದ ದುರಸ್ತಿ ಕಾಮಗಾರಿಗಳು ವಿಳಂಬವಾಗುತ್ತಿವೆ. ಹೀಗಾಗಿ ಹೆಚ್ಚುವರಿ ಲೈನ್‌ಮನ್‌ಗಳನ್ನು ನೇಮಿಸುವಂತೆ ಸಾರ್ವಜನಿಕರು ಮೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು.
ಮೂಡುಬಿದಿರೆ ಉಪವಿಭಾಗ ಕಚೇರಿಯಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ರಾಜೇಶ್ ಕಡಲಕೆರೆ, ಕ್ಲಾರಿಯೋ ಡಿಸೋಜಾ, ಅಲ್ವಿನ್ ಮಿನೇಜಸ್, ಯೋಗೀಶ್ ಶೆಟ್ಟಿ ಹಾಗೂ ವಿಲ್ಫ್ರೆಡ್ ಮೆಂಡೊನ್ಸಾ ಈ ಬಗ್ಗೆ ಮೆಸ್ಕಾಂ ಸುಪರಿಂಟೆಂಡಿಂಗ್ ಇಂಜಿನಿಯರ್ ಕೃಷ್ಣರಾಜ್ ಅವರ ಗಮನ ಸೆಳೆದರು. ಮೂಡುಬಿದಿರೆಯಲ್ಲಿ ಲೈನ್‌ಮನ್‌ಗಳ ಕಾರ್ಯವೈಖರಿ, ಲೋಪಗಳ ಕುರಿತು ನವೀನ್ ಕರ್ಕೇರ, ಅನೀಶ್ ಡಿಸೋಜ ಸಭೆಯ ಗಮನಕ್ಕೆ ತಂದರು.
ಪಡುಮಾರ್ನಾಡು ಪ್ರದೇಶದ ವಿದ್ಯುತ್ ಸಮಸ್ಯೆ ಬಗ್ಗೆ ರಮೇಶ್ ಶೆಟ್ಟಿ ಪ್ರಸ್ತಾಪಿಸಿದರೆ, ಕೊಡಂಗಲ್ಲು ಹಾಗೂ ಸುತ್ತಮುತ್ತಲಿನ ಭಾಗಗಳ ಸಮಸ್ಯೆಗಳ ಕುರಿತು ಕ್ಲಾರಿಯೋ ಡಿಸೋಜ, ಜಗದೀಶ್ ಹಾಗೂ ಸತೀಶ್ ಕೋಟ್ಯಾನ್ ತಿಳಿಸಿದರು. ಗಂಟಾಲ್‌ಕಟ್ಟೆಯ ಫೀಡರ್ ಬದಲಾಯಿಸುವಂತೆ ಹಾಗೂ ಮುಂದಿನ ಜನಸಂಪರ್ಕ ಸಭೆಗೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಜರಾಗುವಂತೆ ಸಾರ್ವಜನಿಕರು ಒತ್ತಾಯಿಸಿದರು.
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮೋಹನ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮೂಡುಬಿದಿರೆ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸುದೇವ ನಾಯಕ್, ಸಂದೀಪ್ ಅಲಂಗಾರ್, ತುಕ್ರಪ್ಪ ಕೆಂಬಾರೆ ಹಾಗೂ ಇತರರು ಉಪಸ್ಥಿತರಿದ್ದರು.