ಮೂಡುಬಿದಿರೆ: ಪತಂಜಲಿ ಯೋಗ ಪರಿವಾರ ಮೂಡಬಿದಿರೆ ವತಿಯಿಂದ 12ನೇ ವಿಶ್ವ ಯೋಗ ದಿನಾಚರಣೆಯನ್ನು ಒಂಟಿಕಟ್ಟೆಯ ಸಂಜೀವ ಶೆಟ್ಟಿ ಸಭಾಂಗಣದಲ್ಲಿ ಬೆಳಿಗ್ಗೆ 6 ಗಂಟೆಯಿಂದ ನಡೆಸಲಾಯಿತು. ಪತಂಜಲಿ ಯೋಗ ಪರಿವಾರದ ಯೋಗ ಶಿಕ್ಷಕರಾದ ಶರತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಹಾಗೂ ಆರೋಗ್ಯ ಜಾಗೃತಿಗೆ ಒತ್ತು ನೀಡಲಾಯಿತು.
ಈ ಸಂದರ್ಭದಲ್ಲಿ ಯೋಗ ತರಗತಿಯನ್ನು ಕಿಶೋರ್ ಹಾಗೂ ವಿವಿಧ ಯೋಗ ಶಾಖೆಗಳ ಶಿಕ್ಷಕರು ನಡೆಸಿಕೊಟ್ಟರು. ವಿವಿಧ ವಯೋಮಾನದ ಯೋಗಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ವಕೀಲ ಶಾಂತಿ ಪ್ರಸಾದ ಹೆಗಡೆ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ಪರಿಣಾಮಕಾರಿ ಸಾಧನವಾಗಿದ್ದು, ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪತಂಜಲಿ ಯೋಗ ಸಮಿತಿ ಮಹಿಳಾ ಪ್ರಮುಖ ಸವಿತಾ, ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶೇಖರ್ ಎಂ, ಮಾಸ್ತಿಕಟ್ಟೆಯ ಯೋಗ ಶಿಕ್ಷಕ ವಿಜಯ್ ಕುಮಾರ್ ಹಾಗೂ ನಿವೃತ್ತ ಸೈನಿಕ ಶ್ರೀಧರ ಭಂಡಾರಿ ಅಲಂಗಾರ್ ಉಪಸ್ಥಿತರಿದ್ದರು.
ರಂಜಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ವಂದಿಸಿದರು.