ಮೂಡುಬಿದಿರೆ: ಇನ್ನರ್ ವೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಷ್ನಿ’ ಕಾರ್ಯಕ್ರಮ ಜೂನ್ 28ರಂದು ಕನ್ನಡ ಭವನದಲ್ಲಿ ನಡೆಯಲಿದ್ದು, 2026-27ನೇ ಸಾಲಿನ ಜಿಲ್ಲಾ ಚೇರ್ಮನ್ ಆಗಿ ರಜನಿ ಭಟ್ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಜರುಗಲಿದೆ ಎಂದು ಅಧಿವೇಶನದ ಕಾರ್ಯದರ್ಶಿ, ಜಿಲ್ಲಾ ಪೂರ್ವ ಚೇರ್ಮನ್ ಶಾಲಿನಿ ನಾಯಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಲಿ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತದ ಇನ್ನರ್ ವೀಲ್ ಕ್ಲಬ್‌ಗಳ ಅಸೋಸಿಯೇಷನ್ ಅಧ್ಯಕ್ಷೆ ವಿನುತಾ ಹರೀಶ್ ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಬಿ.ಎಂ. ಭಟ್ ಭಾಗವಹಿಸಲಿದ್ದಾರೆ. ಅಸೆಂಬ್ಲಿ ಚೇರ್ಮನ್ ಜಯಶ್ರೀ ಅಮರನಾಥ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಉಮಾ ಮಹೇಶ್, ಅಸೆಂಬ್ಲಿ ಕಾರ್ಯದರ್ಶಿ ಶಾಲಿನಿ ನಾಯಕ್, ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಿಶ್ಮಿತಾ ಶೀನಪ್ಪ ಉಪಸ್ಥಿತರಿರುವರು.

ಜೂನ್ 27ರಂದು ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ‘ಶುಕ್ರಿಯಾ’ ಕೃತಜ್ಞತಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿನುತಾ ಹರೀಶ್ ಮುಖ್ಯ ಅತಿಥಿಯಾಗಿ ಹಾಗೂ ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಜಿಲ್ಲಾ 318ರ ವ್ಯಾಪ್ತಿಯ 55 ಕ್ಲಬ್‌ಗಳಿಂದ ಪೂರ್ಣ ಪ್ರಮಾಣದ ನೋಂದಣಿ ನಡೆದಿದ್ದು, 650ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಎಡಿಟರ್ ಸಹನಾ ನಾಗರಾಜ್, ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ರೇಷ್ಮಾ ವರ್ಮ, ಕೋಶಾಧಿಕಾರಿ ಸುಚೇತಾ ಜಯರಾಮ್ ಸುದ್ದಿಗೋಷ್ಠಿಯಲ್ಲಿದ್ದರು.