ಮೂಡುಬಿದಿರೆ: ಫಲ್ಗುಣಿ ನದಿಯ ಹನ್ನೆರಡು ಕವಲಿನ ಬೊಲ್ಲೇರ್ ಪ್ರದೇಶದಲ್ಲಿ ನದಿ ಪಾತ್ರದ ಮರಳನ್ನು ಅಕ್ರಮವಾಗಿ ಗಣಿಗಾರಿಕೆ ನಡೆಸಲು ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದನ್ನು ತಡೆಯುವಂತೆ ಮಾರೂರು ಗ್ರಾಮದ ನಿವಾಸಿಗಳು ಶುಕ್ರವಾರ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ಐದುರಿಂದ ಆರು ವರ್ಷಗಳಿಂದ ಫಲ್ಗುಣಿ ನದಿಯಲ್ಲಿ ಮೂಡುಬಿದಿರೆಯ ಶಾಸಕರ ಆಪ್ತರೆಂದು ಗುರುತಿಸಲ್ಪಟ್ಟ ಕೆಲವರು ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸಾವಿರಾರು ಲೋಡ್ ಮರಳನ್ನು ಹಿಟಾಚಿ ಯಂತ್ರ, ಟಿಪ್ಪರ್ ಹಾಗೂ ಡ್ರೆಜಿಂಗ್ ಯಂತ್ರಗಳ ಮೂಲಕ ಸಾಗಾಟ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಕ್ಕೆ ಗಣಿ ಇಲಾಖೆಯ ಪರೋಕ್ಷ ಬೆಂಬಲವೂ ಇದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಈ ವರ್ಷವೂ ನದಿ ತಟದಲ್ಲಿ ಸರ್ಕಾರಿ ಯೋಜನೆಯ ಹೆಸರಿನಲ್ಲಿ ಮರಳು ತೆಗೆಯಲು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳಿ ಪೂರ್ವ ತಯಾರಿಯಾಗಿ ಕಾರ್ಮಿಕರ ಶೆಡ್ ಸೇರಿದಂತೆ ವಿವಿಧ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ಕಾರ್ಯದ ಜವಾಬ್ದಾರಿಯನ್ನೂ ಹಿಂದಿನ ವರ್ಷಗಳಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದವರೇ ನಿರ್ವಹಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮರಳು ಕಳ್ಳತನ ಮುಂದುವರಿದರೆ ಫಲ್ಗುಣಿ ನದಿಪಾತ್ರದ ರೈತರಿಗೆ ಕೃಷಿ ಹಾಗೂ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಜೊತೆಗೆ ಸರ್ಕಾರಿ ಆಸ್ತಿಯ ಮೇಲೂ ಕಬಳಿಕೆಯ ಆತಂಕ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದ್ದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಂಡು ಜನರನ್ನು ರಕ್ಷಿಸುವಂತೆ ಅವರು ಅಭಯಚಂದ್ರ ಜೈನ್ ಅವರಿಗೆ ವಿನಂತಿಸಿದ್ದಾರೆ.