ಮೂಡುಬಿದಿರೆ : ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಏಪ್ರಿಲ್ 9 ರಿಂದ 12ರ ವರೆಗೆ ನಡೆಯಲಿರುವ ಮನರಂಜನಾ ಆಟಗಳು, ಆಹಾರ ಮಳಿಗೆಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದ 'ಬೆದ್ರ ಉತ್ಸವ' ಉದ್ಘಾಟನಾ ಸಮಾರಂಭ ಶುಕ್ರವಾರ ರಾತ್ರಿ ನಡೆಯಿತು. ಎಂ. ಸಿ. ಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ, ಕರಾವಳಿ ಕರ್ನಾಟಕದಲ್ಲಿ ನಾವು ಮಾಡುವ ಪ್ರತಿಯೊಂದು ಕಾರ್ಯಕ್ರಮವೂ ಉತ್ಸವದ ಸ್ವರೂಪ ಪಡೆದುಕೊಳ್ಳುವುದು ಇಲ್ಲಿನ ವಿಶೇಷತೆ. ಒಳ್ಳೆಯ ಕೆಲಸಕ್ಕೆ ಎಲ್ಲರೂ ಕೈಜೋಡಿಸುವ ಗುಣ ನಮ್ಮ ಹಿರಿಯರು ಬೆಳೆಸಿಕೊಂಡು ಬಂದ ಪರಂಪರೆಯಾಗಿದೆ. ಈ ವೇದಿಕೆಯಲ್ಲಿರುವ ಅತಿಥಿಗಳನ್ನು ಮತ್ತು ಸಂಘಟನೆಯನ್ನು ನೋಡುವಾಗ ಊರಿನ ಹಬ್ಬವನ್ನು ಒಟ್ಟಾಗಿ ಆಚರಿಸುವ ಸಂಕಲ್ಪ ಸ್ತುತ್ಯರ್ಹವಾಗಿದೆ. ಜಿಲ್ಲೆಯ ಅಭಿವೃದ್ಧಿಗಾಗಿ 'ಬ್ಯಾಕ್ ಟು ಊರು' ಅಭಿಯಾನ ಪ್ರಾರಂಭಿಸಲಾಗಿದ್ದು, ಯಶಸ್ವಿ ಉದ್ಯಮಿಗಳು ಹಾಗೂ ಹೊರಗಿನ ಉದ್ಯೋಗಸ್ಥರು ತಮ್ಮ ಅನುಭವ ಮತ್ತು ಸಂಪನ್ಮೂಲವನ್ನು ಊರಿನ ಏಳಿಗೆಗೆ ಬಳಸಬೇಕು ಎಂಬುದು ಈ ಯೋಜನೆಯ ಆಶಯವಾಗಿದೆ. ಊರಿನ ಹಿರಿಮೆ ಹೆಚ್ಚಿಸಲು ಬೆದ್ರ ಉತ್ಸವದಂತಹ ಕಾರ್ಯಕ್ರಮಗಳು ಮಾದರಿ ಎಂದರು. ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯಸ್ವಾಮೀಜಿಯವರು ಆಶೀರ್ವಚನ ನೀಡಿ, ಬೆದ್ರ ಉತ್ಸವ ಎನ್ನುವುದು ಕೇವಲ ಆಚರಣೆಯಲ್ಲ, ಅದು ಇಲ್ಲಿನ ಸಾಂಸ್ಕೃತಿಕ ಚೌಕಟ್ಟುಗಳ ಪ್ರತೀಕವಾಗಿದೆ. ಆಧುನಿಕ ಪ್ರಜ್ಞೆ ಬೆಳೆದಂತೆ ಮೂಡುಬಿದಿರೆ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಾದರಿಯಾಗಿ ಬೆಳೆದಿದೆ. ಈ ಉತ್ಸವವು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಮನಸ್ಸನ್ನು ಅರಳಿಸುವ ಕೆಲಸ ಮಾಡಲಿ. ಜಾತಿ-ಮತ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಈ ಹಬ್ಬವನ್ನು ಆಚರಿಸುತ್ತಿರುವುದು ಸಾಮರಸ್ಯದ ಸಂಕೇತವಾಗಿದೆ ಎಂದು ಹಾರೈಸಿದರು.

ಕಟಪಾಡಿ ದ್ವಾರಕಮಯಿ ಮಠದ ಸಾಯಿ ಈಶ್ವರ ಗುರೂಜಿ ಸಂದೇಶ ನೀಡಿ , ಇಡೀ ವಿಶ್ವವೇ ಇಂದು ಬೆದ್ರ ಉತ್ಸವವನ್ನು ಕುತೂಹಲದಿಂದ ನೋಡುತ್ತಿದೆ. ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಸಮಾಜದ ಹಿತಕ್ಕಾಗಿ ಕೆಲಸ ಮಾಡುವಾಗ ಭಗವಂತನ ಕೃಪೆ ಲಭಿಸುತ್ತದೆ. ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ನಿಜವಾದ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಬೆದ್ರ ಸಮಿತಿ ಉಪಾಧ್ಯಕ್ಷ ಸುದರ್ಶನ ಎಂ., ವಿವಿಧ ಕ್ಷೇತ್ರಗಳ ಸಾಧಕರಾದ ಅಬುಅಲಾ ಪುತ್ತಿಗೆ, ಕೊರಗಪ್ಪ, ತಿಮ್ಮಯ್ಯ ಶೆಟ್ಟಿ, ಜಗದೀಶ್ ಅಧಿಕಾರಿ, ಕೃಷ್ಣರಾಜ್ ಹೆಗ್ಡೆ, ನಾರಾಯಣ ಪಿ. ಎಂ, ಶ್ರೀಪತಿ ಭಟ್, ರಂಜಿತ್ ಪೂಜಾರಿ, ಮೇಘನಾದ್ ಶೆಟ್ಟಿ, ನಂದಕುಮಾರ್ ಕುಡ್ವ, ಸುಂದರ್ ಭೋವಿ, ಮಯೂರಕೀರ್ತಿ, ತ್ರಿವೇಣಿ ಗಣೇಶ್ ಶೆಟ್ಟಿ, ರಾಜೇಶ್ ನಾಯ್ಕ್, ಆನಂದ ಪೂಜಾರಿ, ಸುರೇಶ್ ಕೋಟ್ಯಾನ್, ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು.

ಬೆದ್ರ ಉತ್ಸವ ಸಮಿತಿಯ ಸಂಚಾಲಕ ಹರೀಶ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್, ಕೋಶಾಧಿಕಾರಿ ನಾಗೇಶ್ ಬಂಗೇರ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.