ಮೂಡುಬಿದಿರೆ: ಶಿಕ್ಷಣ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಬ್ಬ ಕಲಾವಿದ ಅಡಗಿರುತ್ತಾನೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿನೆಮಾ ನಟ ಹಾಗೂ ಸಂಭಾಷಣೆಕಾರ ಪ್ರಸನ್ನ ಶೆಟ್ಟಿ ಬೈಲೂರು ತಿಳಿಸಿದರು.

ಶ್ರೀ ಧವಲಾ ಕಾಲೇಜಿನ ಲಲಿತಕಲಾ ಸಂಘದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ 'ಧವಲಾ ಸಿರಿ-2026' ಅನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಸಾಂಸ್ಕೃತಿಕ ಹಬ್ಬಗಳು ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಅವರನ್ನು ಸನ್ಮಾನಿಸಲಾಯಿತು.

ಡಿಜೆವಿವಿ ಸಂಘದ ಕಾರ್ಯದರ್ಶಿ ಅಭಿಜಿತ್ ಎಂ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಬೆನೆಡಿಕ್ಟಾ ಸೆರ್ರ, ವಿಶ್ರಾಂತ ಪ್ರಾಂಶುಪಾಲ ಅಜಿತ್ ಪ್ರಸಾದ್ ಜೈನ್, ಪ್ರದೀಪ್ ಜೈನ್ ಭಾಗವಹಿಸಿದ್ದರು. ವಿದ್ಯಾರ್ಥಿ ನಾಯಕ ಸುಶಾಂತ್ ಹಾಗೂ ಜೊತೆ ಕಾರ್ಯದರ್ಶಿ ಸೃಜನ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಪಾರ್ಶ್ವನಾಥ ಅಜ್ರಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಮಲ್ಲಿಕಾ ರಾವ್ ಅತಿಥಿಗಳನ್ನು ಪರಿಚಯಿಸಿದರು. ವೀಕ್ಷಿತಾ ಮತ್ತು ಶ್ರೇಯ ಕಾರ್ಯಕ್ರಮ ನಿರೂಪಿಸಿದರು. ಲಲಿತಕಲಾ ಸಂಘದ ಕಾರ್ಯದರ್ಶಿ ಪ್ರಜ್ವಲ್ ವಂದಿಸಿದರು.