ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಇರುವೈಲು ಶ್ರೀ ದುರ್ಗಾಪರಮೇಶ್ವರೀ ತಾಯಿಯ ಸಪರಿವಾರ ಶಕ್ತಿಯಾಗಿ ಅವತರಿಸಿರುವ, ಸುಮಾರು 800 ವರ್ಷಗಳ ಪುರಾತನ ಇತಿಹಾಸವಿರುವ ಮಾರಿ ಬೊಳುವಾಲ ಗುಡ್ಡ (ಮಾಡ) ಶ್ರೀ ಹೊಸಮರಾಯ ದೈವದ ಪುಣ್ಯಕ್ಷೇತ್ರವು ಭಕ್ತಾದಿಗಳ ಸಹಕಾರದೊಂದಿಗೆ ಶಿಲಾಮಯವಾಗಿ ಮರುನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ.

ಕುವೆಸ್ಥಳ ಬಾಳಿಕೆಯ ಯಜಮಾನನಿಗೆ ರಾತ್ರಿ ವೇಳೆ ತನ್ನ ಜಮೀನಿನಲ್ಲಿ ವಿಚಿತ್ರ ವ್ಯಕ್ತಿಗಳು ಗದ್ದೆ ನಿರ್ಮಾಣ ಮಾಡುವ ದೃಶ್ಯ ಗೋಚರಿಸಿದ್ದು, ದೈವಿಕ ಶಕ್ತಿಯ ಈ ಸೂಚನೆಯನ್ನು ಅಲಕ್ಷಿಸಿದ ಕಾರಣ ಅವರು ಮೃತಪಟ್ಟಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ನಂತರ ಜ್ಯೋತಿಷ್ಯದ ಮೂಲಕ ಇದು ಶ್ರೀ ಹೊಸಮರಾಯ ಮತ್ತು ಸಾರಮಣಿ ದೈವಗಳ ಕಾರಣಿಕ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ, ಮೊದಲು ಧರ್ಮಚಾವಡಿಯಲ್ಲಿ ಈ ಶಕ್ತಿಗಳನ್ನು ಸ್ಥಾಪಿಸಿ, ಬಳಿಕ ದೈವದ ನುಡಿಯಂತೆ ಬಿಳಿಕಲ್ಲು ಗುಡ್ಡದಲ್ಲಿ ಏಳು ಕೋಲು ಎತ್ತರದ ‘ಮಾಡ’ ನಿರ್ಮಿಸಿ ಆರಾಧಿಸಿಕೊಂಡು ಬರಲಾಗುತ್ತಿದೆ.

ಕ್ಷೇತ್ರದ ಮಹಿಮೆಗೆ ಸಾಕ್ಷಿಯಾಗಿ ದೈವವೇ ನಿರ್ಮಿಸಿಕೊಟ್ಟ ನಾಲ್ಕು ಮೂಲೆಯ ತೀರ್ಥಬಾವಿ ಇಂದಿಗೂ ಇರುವುದು ಇಲ್ಲಿನ ವಿಶೇಷ. ಕುವೆಸ್ಥಳ ಬಾಳಿಕೆಯ ಯಜಮಾನಿ ನೀರಿಗಾಗಿ ಪಡುತ್ತಿದ್ದ ಕಷ್ಟವನ್ನು ಕಂಡು ದೈವವು ಕನಸಿನಲ್ಲಿ ಬಂದು ಈ ಬಾವಿಯನ್ನು ನಿರ್ಮಿಸಿದ ಪವಾಡದ ಕುರುಹು ಇದಾಗಿದೆ. ಈ ತೀರ್ಥಬಾವಿ, ಪಿಲಿಪಂಜರ, ನಾಗಸಾನಿಧ್ಯದ ಕೆರೆ ಹಾಗೂ ದೈವ ಕುಳಿತ ಬಂಡೆಕಲ್ಲುಗಳು ಕ್ಷೇತ್ರದ ಪಾವಿತ್ರ್ಯತೆಯನ್ನು ಸಾರುತ್ತಿವೆ. ಶ್ರೀ ಹೊಸಮರಾಯ ದೈವವು ಮಾಡ್ಲಾಯಿ ದೈವದೊಂದಿಗೆ ಕ್ಷೇತ್ರ ರಕ್ಷಕನಾಗಿ ಹಾಗೂ ಕೊಡಮಣಿತ್ತಾಯ ದೈವದೊಂದಿಗೆ ಗ್ರಾಮ ರಕ್ಷಕನಾಗಿ ನೆಲೆನಿಂತಿದೆ. ವಾಸ್ತು ಶಾಸ್ತ್ರಜ್ಞ ಕುಡುಪು ಶ್ರೀ ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನ ಹಾಗೂ ಪೂಂಜ ಶ್ರೀ ಪ್ರಕಾಶ ಆಚಾರ್ಯರ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ, ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಈ ಶಿಲಾಮಯ ಮಾಡದ ಜೀರ್ಣೋದ್ಧಾರ ಕಾರ್ಯ ನಡೆದಿದೆ. ಕಳೆದ ಫೆಬ್ರವರಿ 20ರಂದು ಶಿಲಾನ್ಯಾಸ ನೆರವೇರಿದ್ದು, ಅತ್ಯಲ್ಪ ಅವಧಿಯಲ್ಲಿ ಊರ ಹಾಗೂ ಪರವೂರ ಭಕ್ತರ ತನು-ಮನ-ಧನದ ಸಹಕಾರದೊಂದಿಗೆ ಕಾಮಗಾರಿ ಪೂರ್ಣಗೊಂಡಿದೆ.

ಏಪ್ರಿಲ್ 10ರ ಶುಕ್ರವಾರದಂದು ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಬೆಳಿಗ್ಗೆ ಗಣಯಾಗ, ಪ್ರತಿಷ್ಠಾ ಹೋಮ, ಪ್ರಧಾನ ಹೋಮ, ಕಲಶ ಪ್ರತಿಷ್ಠೆ, ಆಶ್ಲೇಷ ಬಲಿ ಹಾಗೂ ವಟು ಆರಾಧನೆ ನೆರವೇರಿತು. ಕುವೆಸ್ಥಳ ಬಾಳಿಕೆಯಿಂದ ದೈವದರ್ಶನವಾಗಿ, ನೂತನ ಮಾಡದಲ್ಲಿ ದೈವ ಪ್ರತಿಷ್ಠಾಪನೆ ಹಾಗೂ ಭಂಡಾರ ಪ್ರತಿಷ್ಠೆ ನಡೆಯಿತು. ಈ ಸಂದರ್ಭದಲ್ಲಿ ಕಲಶಾಭಿಷೇಕ, ಪಂಚಪರ್ವ, ಪ್ರಸನ್ನ ಪೂಜೆ ಹಾಗೂ ಪಲ್ಲ ಪೂಜೆ ನೆರವೇರಿತು. ರಾತ್ರಿ ಶ್ರೀ ಹೊಸಮರಾಯ ದೈವದ ನೇಮೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಶತಮಾನಗಳ ಇತಿಹಾಸವಿರುವ ಈ ಕ್ಷೇತ್ರವು ಜೀರ್ಣಾವಸ್ಥೆಯಲ್ಲಿತ್ತು ಹಾಗೂ ದೈವದ ಇಚ್ಛೆಯಂತೆ ಭಕ್ತರೆಲ್ಲರೂ ಒಂದಾಗಿ ಶಿಲಾಮಯ ಗುಡಿಯನ್ನು ನಿರ್ಮಿಸಿರುವುದು ಇಡೀ ಗ್ರಾಮಕ್ಕೆ ಶ್ರೇಯಸ್ಸು ತರಲಿದೆ ಎಂದು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಐ ರಾಘವೇಂದ್ರ ಆಸ್ರಣ್ಣ ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಶಿಲಾನ್ಯಾಸ ನೆರವೇರಿದ ಬಳಿಕ ಊರ ಪರವೂರ ಭಕ್ತಾದಿಗಳು ಸ್ವತಃ ಮುಂದೆ ಬಂದು ಏಪ್ರಿಲ್ 8 ರವರೆಗೂ ಅವಿರತವಾಗಿ ಶ್ರಮದಾನ ನಡೆಸಿದ್ದಾರೆ. ಪ್ರತಿದಿನ 30 ರಿಂದ 50 ರಷ್ಟು ಯುವಕರು, ಮಕ್ಕಳು ಹಾಗೂ ಹಿರಿಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದು, ಇವರಿಗೆ ಸ್ಥಳೀಯ ಜನರು ಉಪಹಾರದ ವ್ಯವಸ್ಥೆ ನೀಡಿ ಸಹಕರಿಸಿದ್ದಾರೆ. ಇದೇ ವ್ಯಾಪ್ತಿಯಲ್ಲಿ ಕಲ್ಲು ಕೋರೆ ನಡೆಸುತ್ತಿರುವ ಹರೀಶ್ ಕೋಟ್ಯಾನ್ ಬಂಟ್ವಾಳ ಅವರು ಅಗತ್ಯವಿದ್ದ ಕಲ್ಲುಗಳನ್ನು ಉಚಿತವಾಗಿ ನೀಡುವ ಮೂಲಕ ಭಕ್ತಿ ಮೆರೆದಿದ್ದಾರೆ. ಇದೆಲ್ಲಾ ಕಾರ್ಯಗಳು ಕ್ಷೇತ್ರದ ಹೊಸಮರಾಯ ದೈವದ ಶಕ್ತಿಯಿಂದಲೇ ಸಂಪನ್ನಗೊಂಡಿದೆ ಎಂದು ಭಕ್ತಾದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.