ಬಂಟ್ವಾಳ: ತಾಲೂಕಿನ ಫಲ್ಗುಣಿ ನದಿ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಪುರಲ್ದ ಚೆಂಡು ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಕ್ತಿ ಮತ್ತು ಸಾಂಪ್ರದಾಯಿಕ ಕ್ರೀಡೆಯ ಅಪೂರ್ವ ಸಂಗಮವಾಗಿರುವ ಈ ಉತ್ಸವವು ಏಪ್ರಿಲ್ 6 ರಿಂದ ಆರಂಭಗೊಂಡು ಐದು ದಿನಗಳ ಕಾಲ ನಡೆಯಲಿದೆ. ಪುರಾಣ ಪ್ರಸಿದ್ಧ ಸುರಥ ಮಹಾರಾಜ ಹಾಗೂ ಸುಮಾಧಿ ಎಂಬ ವೈಷ್ಣವ ವ್ಯಾಪಾರಿಯಿಂದ ಪ್ರತಿಷ್ಠಾಪಿಸಲ್ಪಟ್ಟ ಈ ಕ್ಷೇತ್ರವು ತನ್ನದೇ ಆದ ವಿಶಿಷ್ಟ ಆಚರಣೆಗಳಿಂದ ಪ್ರಸಿದ್ಧವಾಗಿದೆ. ಇಲ್ಲಿನ ದೇವಿಯ ವಿಗ್ರಹವು ವಿಶೇಷ ಔಷಧೀಯ ಗುಣವುಳ್ಳ ಜೇಡಿಮಣ್ಣಿನಿಂದ ತಯಾರಿಸಲ್ಪಟ್ಟಿದೆ. ದೇವಸ್ಥಾನದ ತಾಮ್ರದ ಫಲಕಗಳ ಮರದ ಕೆತ್ತನೆಯ ಛಾವಣಿಗಳು ಹಿಂದೂ ವಾಸ್ತುಶೈಲಿಯ ವೈಭವವನ್ನು ಸಾರುತ್ತವೆ. ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಪುರಲ್ದ ಚೆಂಡು ಕೆಟ್ಟದ್ದರ ವಿರುದ್ಧ ಒಳ್ಳೆಯದರ ಹೋರಾಟವನ್ನು ಪ್ರತಿನಿಧಿಸುತ್ತದೆ. ಏಪ್ರಿಲ್ ತಿಂಗಳ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಈ ಆಟಕ್ಕೆ ತಲೆಮಾರುಗಳ ಇತಿಹಾಸವಿದೆ. ಹಿಂದೆ ಕೇವಲ ಮೂರು ದಿನಗಳ ಕಾಲ ಚೆಂಡು ಉತ್ಸವ ನಡೆಯುತ್ತಿತ್ತು. ರಾಣಿ ಚೆನ್ನಮ್ಮ ಗುರುಪುರ ಜಂಗಮ ಮಠಕ್ಕೆ ಆಗಮಿಸಿದಾಗ ಮೂರನೇ ದಿವಸದ ಚೆಂಡಿನ ಉತ್ಸವವು ಮುಗಿದಿತ್ತು. ಚೆಂಡು ಉತ್ಸವವನ್ನು ನೋಡಲು ಆಸೆಪಟ್ಟ ರಾಣಿ ಚೆನ್ನಮ್ಮನ ಅಪೇಕ್ಷೆಯಂತೆ ಮುಂದಿನ ದಿನಗಳಲ್ಲಿ ಪೊಳಲಿ ಚೆಂಡು 5 ದಿನಗಳ ಕಾಲ ನಡೆಯಲು ಪ್ರಾರಂಭಗೊಂಡಿತು. ಆ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಪೊಳಲಿ ದೇಗುಲಕ್ಕೆ ಬೃಹತ್ ಬ್ರಹ್ಮರಥವನ್ನು ನೀಡಿದ್ದಾಳೆ ಎಂಬ ಪ್ರತೀತಿಯೂ ಇದೆ. ಇತಿಹಾಸದ ಪ್ರಕಾರ ಚೆಂಡಿನ ಮೊದಲ ದಿನ ಸಂಜೆ ಸಮಗಾರ ಕುಟುಂಬದವರು ಚೆಂಡನ್ನು ದೇವಾಲಯದ ಗೋಪುರದಲ್ಲಿ ಇಡುತ್ತಾರೆ. ದೇವಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಅದನ್ನು ಮೈದಾನಕ್ಕೆ ತರಲಾಗುತ್ತದೆ. ಈ ಆಟದಲ್ಲಿ ಎಷ್ಟು ಸಂಖ್ಯೆಯ ಜನ ಬೇಕಾದರೂ ಭಾಗವಹಿಸಬಹುದು. ಎದುರಾಳಿ ತಂಡದ ಕಡೆಗೆ ಚೆಂಡನ್ನು ದಾಟಿಸಿ, ನಂತರ ಮಧ್ಯದಲ್ಲಿ ತಂದು ಇಟ್ಟಾಗ ಒಂದು ಗೋಲು ಅಥವಾ ಚೆಂಡು ಆಗಿದೆ ಎಂದು ಲೆಕ್ಕ ಹಾಕಲಾಗುತ್ತದೆ. ಸಂಜೆ 6 ಗಂಟೆಯಿಂದ ಪ್ರಾರಂಭವಾಗುವ ಈ ಆಟದಲ್ಲಿ ಪ್ರತಿ ದಿನ ಎರಡು ತಂಡಗಳಲ್ಲಿ ಒಂದು ತಂಡದವರು ಮೂರು ಬಾರಿ ಚೆಂಡನ್ನು ಎತ್ತಿ ಮಧ್ಯದಲ್ಲಿರುವವರಿಗೆ ನೀಡಿದಾಗ ಗೆಲುವು ಸಾಧಿಸಿದಂತೆ ಪರಿಗಣಿಸಲಾಗುತ್ತದೆ. ಇದಕ್ಕೆ ಸಮಯದ ಮಿತಿಯಿಲ್ಲ. ದೇವಸ್ಥಾನದ ಅಂಗಳದಲ್ಲಿ ಒಂದು ಸುತ್ತು ಚೆಂಡನ್ನು ತಂದ ಮೇಲೆ ಆ ದಿನದ ಉತ್ಸವ ಮುಕ್ತಾಯಗೊಂಡು ಬಲಿ ಉತ್ಸವಗಳು ಪ್ರಾರಂಭವಾಗುತ್ತವೆ. ಈ ವಿಶೇಷ ಚರ್ಮದ ಚೆಂಡನ್ನು ತಯಾರಿಸುವ ಜವಾಬ್ದಾರಿಯನ್ನು ಕಳೆದ 27 ವರ್ಷಗಳಿಂದ ಮೂಡುಬಿದಿರೆ ಗಾಂಧಿನಗರದ ಮಾರ್ಪಾಡಿಯ ಪದ್ಮನಾಭ ಸಮಗಾರ ನಿರ್ವಹಿಸುತ್ತಿದ್ದಾರೆ. ಹಿಂದೆ ಮಿಜಾರಿನ ರಾಮ್ ನಾಯ್ಕ್ ಚೆಂಡು ತಯಾರಿಸುತ್ತಿದ್ದರು. ಅವರ ನಂತರ ಅವರ ಮಕ್ಕಳು ಬೇರೆ ಉದ್ಯೋಗದಲ್ಲಿ ತೊಡಗಿದ್ದರಿಂದ, ದೇವಿಯ ಆಶೀರ್ವಾದದಂತೆ ಈ ಪುಣ್ಯಕಾರ್ಯ ತಮಗೆ ಒದಗಿ ಬಂತು ಎಂದು ಪದ್ಮನಾಭ ಸಮಗಾರ ತಿಳಿಸಿದ್ದಾರೆ. ಇವರು ಪ್ರಸ್ತುತ ಸುಮಾರು 29 ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ಚೆಂಡು ತಯಾರಿಸಿ ನೀಡುತ್ತಿದ್ದು, ಇದರಲ್ಲಿ ಪೊಳಲಿಯ ಚೆಂಡು ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿದೆ. ಉತ್ಸವದ ಮೊದಲ ದಿನದಂದು ಕ್ಷೇತ್ರದ ಸಂಬಂಧಪಟ್ಟವರು ಮೂಡುಬಿದಿರೆಗೆ ಆಗಮಿಸಿ ಸಾಂಪ್ರದಾಯಿಕವಾಗಿ ಚೆಂಡನ್ನು ಕೊಂಡೊಯ್ಯುತ್ತಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹೊರರಾಜ್ಯ ಹಾಗೂ ವಿದೇಶಗಳಿಂದಲೂ ಸಾವಿರಾರು ಭಕ್ತರು ಪೊಳಲಿಗೆ ಆಗಮಿಸುತ್ತಿದ್ದಾರೆ.

ವಿಶೇಷ ವರದಿ: ನಿಶಾ