ಮೂಡುಬಿದಿರೆ: ಇಲ್ಲಿನ ರೋಟರಿ ಪದವಿ ಪೂರ್ವ ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 99.45 ಫಲಿತಾಂಶ ದಾಖಲಿಸಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 185 ವಿದ್ಯಾರ್ಥಿಗಳಲ್ಲಿ 184 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದವರ ಪೈಕಿ 77 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 106 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಕೃತ್ವಿ ಎನ್ ಶೆಟ್ಟಿ 590 ಅಂಕಗಳನ್ನು (ಶೇ. 98.33) ಪಡೆಯುವ ಮೂಲಕ ವಿಭಾಗಕ್ಕೆ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ದಿಶಾರಾಜ್ 569 ಅಂಕ (ಶೇ. 94.8) ಪಡೆದು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಾನ್ಯ ಎಂ 600ಕ್ಕೆ 585 ಅಂಕ (ಶೇ. 97.5) ಗಳಿಸಿ ಪ್ರಥಮ ಸ್ಥಾನ ಪಡೆದರೆ, ದಿಶಾ ಶರಲ್ ಲೋಬೋ ಹಾಗೂ ನಿರೀಕ್ಷಾ ಶೆಟ್ಟಿ ತಲಾ 582 ಅಂಕ (ಶೇ. 97) ಪಡೆಯುವ ಮೂಲಕ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.

ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು ಅಭಿನಂದಿಸಿದ್ದಾರೆ. ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸಂಚಾಲಕರು ಹಾಗೂ ಸರ್ವ ಸದಸ್ಯರು ಸಂಸ್ಥೆಯ ಪ್ರಾಂಶುಪಾಲರನ್ನು, ಉಪನ್ಯಾಸಕ ವೃಂದದವರನ್ನು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.