ಮೂಡುಬಿದಿರೆ: 2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೆಂಕಮಿಜಾರು ಸರಕಾರಿ ಪದವಿಪೂರ್ವ ಕಾಲೇಜು ಶೇ 94 ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳ ಪೈಕಿ 11 ಮಂದಿ ಡಿಸ್ಟಿಂಕ್ಷನ್ ಹಾಗೂ 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶೇಕಡಾ 100 ಫಲಿತಾಂಶ ಲಭಿಸಿದೆ. ಈ ವಿಭಾಗದಲ್ಲಿ ಶ್ರೀಶಾನ್ (561), ಮಂಜುಶ್ರೀ (550) ಹಾಗೂ ಮುಸ್ತಾಫಾ (548) ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 35 ವಿದ್ಯಾರ್ಥಿಗಳಲ್ಲಿ 5 ಮಂದಿ ಡಿಸ್ಟಿಂಕ್ಷನ್ ಹಾಗೂ 26 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮೂಲಕ ವಾಣಿಜ್ಯ ವಿಭಾಗದಲ್ಲಿ ಶೇ 97.14 ಫಲಿತಾಂಶ ದಾಖಲಾಗಿದೆ. ಮಹಮ್ಮದ್ ಆಶಿಕ್ (563), ಐಫಾ (558) ಮತ್ತು ದೀಪ್ತಿ ಕುಮಾರಿ (549) ಅಂಕ ಗಳಿಸಿದ ಪ್ರಮುಖ ವಿದ್ಯಾರ್ಥಿಗಳಾಗಿದ್ದಾರೆ. ಕಲಾ ವಿಭಾಗದಲ್ಲಿ ಹಾಜರಾದ 22 ವಿದ್ಯಾರ್ಥಿಗಳ ಪೈಕಿ 10 ಮಂದಿ ಪ್ರಥಮ ಶ್ರೇಣಿ ಹಾಗೂ 7 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಒಟ್ಟು ಶೇ 77.27 ಫಲಿತಾಂಶ ಬಂದಿದೆ. ಕಾಲೇಜಿನ ಈ ಸಾಧನೆಗೆ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.