ಮೂಡಬಿದಿರೆ: ಪೇಟೆಯ ಹೃದಯಭಾಗದಲ್ಲಿರುವ ಖಾಸಗಿ ಬಸ್‌ ಸ್ಟ್ಯಾಂಡ್‌ನಲ್ಲಿ ನೀರಿನ ತೀವ್ರ ಅಭಾವದಿಂದ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಲಾಗಿದ್ದು, ಪ್ರಯಾಣಿಕರು ಮತ್ತು ಸ್ಥಳೀಯರಿಗೆ ಭಾರೀ ತೊಂದರೆ ಉಂಟಾಗಿದೆ. ಪ್ರತಿದಿನ ಸಾವಿರಾರು ಜನರು ಸಂಚರಿಸುವ ಈ ಬಸ್‌ ಸ್ಟ್ಯಾಂಡ್‌ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತೀವ್ರವಾಗಿದ್ದು, ವಿಶೇಷವಾಗಿ ಶೌಚಾಲಯ ಬಂದ್ ಆಗಿರುವುದು ಮಹಿಳೆಯರು, ಶಾಲಾ ವಿದ್ಯಾರ್ಥಿಗಳು, ವ್ಯಾಪಾರ ಮಳಿಗೆಯಲ್ಲಿನ ಸಿಬ್ಬಂದಿ ಹಾಗೂ ಹೊರಗಿನಿಂದ ಬರುವ ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿಲ್ಲ ಎಂಬ ದೂರಿನ ನಡುವೆ ಈ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಸ್ಥಳೀಯರ ಪ್ರಕಾರ, ಪುರಸಭೆಗೆ ಈ ಬಸ್‌ ಸ್ಟ್ಯಾಂಡ್ ಹಾಗೂ ವಾಣಿಜ್ಯ ಸಂಕೀರ್ಣದಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದರೂ, ಮೂಲಸೌಕರ್ಯಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಅನೇಕ ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಶೌಚಾಲಯದ ಕೊರತೆಯಿಂದ ಡಯಾಬಿಟಿಸ್‌ ಇರುವವರಿಗೆ ಹೆಚ್ಚು ತೊಂದರೆ ಉಂಟಾಗುತ್ತಿದ್ದು, ತುರ್ತು ಅಗತ್ಯಗಳಿಗೆ ಪರ್ಯಾಯ ವ್ಯವಸ್ಥೆಯಿಲ್ಲದೆ ಆತಂಕ ಹೆಚ್ಚಾಗಿದೆ. ಸಧ್ಯ ಶುಗರ್ ಇರುವವರಿಗೆ ಅವಕಾಶ ಕಲ್ಪಿಸಿದರೂ ಎಷ್ಟು ಸಮಯ ಎನ್ನುವುದು ತಿಳಿದುಬಂದಿಲ್ಲ.

ಸಾರ್ವಜನಿಕರ ಒತ್ತಾಯ ಬಸ್‌ ಸ್ಟ್ಯಾಂಡ್‌ನಲ್ಲಿ ನೀರಿನ ಸಮಸ್ಯೆ ಪರಿಹರಿಸಿ, ಶೌಚಾಲಯವನ್ನು ತಕ್ಷಣ ಪುನರಾರಂಭ ಮಾಡಬೇಕು. ಜೊತೆಗೆ ಕುಡಿಯುವ ನೀರು, ಸ್ವಚ್ಛತೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಸುಧಾರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. “ಸಾರ್ವಜನಿಕರಿಂದ ಲಕ್ಷಾಂತರ ಆದಾಯ ಗಳಿಸುವ ಸ್ಥಳದಲ್ಲಿ ಇಂತಹ ಅವ್ಯವಸ್ಥೆ ಅಸಹ್ಯಕರ. ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.