ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಹಾಗೂ ಮೂಡುಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ವಿಭಾಗದ ವಾಲಿಬಾಲ್ ಚಾಂಪಿಯನ್‌ಶಿಪ್ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಶನಿವಾರ ಸಾಯಂಕಾಲ ಆರಂಭಗೊoಡಿತು. ಮಹಿಳೆಯರ ವಿಭಾಗದ ಪಂದ್ಯಾಟವನ್ನು ವಕೀಲೆ ಶ್ವೇತಾ ಜೈನ್ ಉದ್ಘಾಟಿಸಿ, ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲಾ ಕಡೆಗಳಲ್ಲೂ ಇದ್ದಾರೆ. ಭಾರತದ ವಾಲಿಬಾಲ್ ತಂಡವು ದಕ್ಷಿಣ ಭಾರತಕ್ಕೆ ಹೋಲಿಸಿದರೆ ಬಲಿಷ್ಠವಾದ ತಂಡವಾಗಿದೆ ಆದರೆ ಜಪಾನ್, ಚೀನಾ ಮತ್ತು ಕೊರಿಯಾ ತಂಡಗಳಿಗೆ ಹೋಲಿಸಿದರೆ ನಮ್ಮ ದೇಶದ ಮಹಿಳಾ ತಂಡಗಳಿಗೆ ಹೆಚ್ಚಿನ ತರಬೇತಿಯ ಅವಶ್ಯಕತೆಯಿದೆ ಎಂದೆನಿಸುತ್ತದೆ ಎಂದರು. ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್ ಸತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್ ಅಂಕಣ ಉದ್ಘಾಟಿಸಿದರು. ಮೂಡುಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ವಿನಯ್ ಆಳ್ವ, ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಶೆಟ್ಪಿ, ಉದ್ಯಮಿ ಜಾವೆದ್ ಶೇಕ್ ಭಾಗವಹಿಸಲಿದ್ದಾರೆ. ನಾಗೇಶ್ ಎಸ್ ಸ್ವಾಗತಿಸಿದರು. ಜಿಲ್ಲಾ ಅಸೋಸಿಯೇಷನ್ ಕಾರ್ಯದರ್ಶಿ ಶಂಕರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಪ್ರಮೋದ್ ಕಾರ್ಯಕ್ರಮ ನಿರೂಪಿಸಿದರು.