ಮೂಡುಬಿದಿರೆ: ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಮತ್ತು ಬ್ರಹ್ಮಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಮೂಡುಬಿದಿರೆ ಸಂಯುಕ್ತ ಆಶ್ರಯದಲ್ಲಿ ಸ್ಪಾರ್ಕ್ ಬಿಲ್ಲವ ವೃತ್ತಿಪರರ ಸಮಿತಿ ಬೆಂಗಳೂರು ವತಿಯಿಂದ ‘ಬೆಳಕು - 2026 ಯಶಸ್ಸಿನ ಮಾರ್ಗಗಳು’ ಎನ್ನುವ ಮಹಾಶಿಕ್ಷಣ, ವೃತ್ತಿ ಮಾರ್ಗದರ್ಶನ ಹಾಗೂ ಉದ್ಯೋಗಾರ್ಹತಾ ಕಾರ್ಯಾಗಾರ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಶನಿವಾರ ನಡೆಯಿತು.

ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ‌ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಇಂತಹ ಶಿಬಿರಗಳ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಕಾರ್ಯಾಗಾರದ ಉದ್ದೇಶವನ್ನು ಶ್ಲಾಘಿಸಿದರು.

ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಅಧ್ಯಕ್ಷ ಎಂ ವೇದ ಕುಮಾರ್ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಇ

ದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ. 100ರಷ್ಟು ಅಂಕ ಗಳಿಸಿದ ದಿಶಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಆಕೆಯ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಬೆಂಗಳೂರು ಬಿಲ್ಲವ ಅಸೋಸಿಯೇಷನ್ ವಹಿಸಿಕೊಳ್ಳಲಿದೆ ಎಂದು ಎಂ ವೇದ ಕುಮಾರ್ ಘೋಷಿಸಿದರು.

ಕಾರ್ಯಾಗಾರದ ಮುಖ್ಯ ಉಪನ್ಯಾಸಕರಾಗಿ ಅಲೆನ್ ಕ್ಯಾರಿಯರ್ ಇನ್‌ಸ್ಟಿಟ್ಯೂಟ್‌ನ ಕೇಂದ್ರ ಮುಖ್ಯಸ್ಥ ಅಭಿಮನ್ಯು ತೋಮರ್, ನಿಟ್ಟೆ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವೃತ್ತಿಪರ ಸಮಾಲೋಚನೆ ಹಾಗೂ ತರಬೇತಿ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್ ಮತ್ತು ಬೆಂಗಳೂರು ಜಿಸಿಸಿ ಇಂಡಸ್ಟ್ರಿಯ ಹಿರಿಯ ಹಣಕಾಸು ಅಧಿಕಾರಿ ಕಿಶೋರ್ ಕೋಟ್ಯಾನ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಹಿರಿಯ ಉಪಾಧ್ಯಕ್ಷ ಕೇಶವ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಚಿತ್ತರಂಜನ್ ಸಾಲಿಯಾನ್, ಶ್ರೀಕಾಂತ್, ಸ್ಪಾರ್ಕ್ ಸಮಿತಿ ಅಧ್ಯಕ್ಷ ರವಿಚಂದ್ರ ಎಂ ಉಪಸ್ಥಿತರಿದ್ದರು.

ಅನಿಷ್ಕ ಮತ್ತು ಅವಿಶ್ಕ ಪ್ರಾರ್ಥಿಸಿದರು. ಪವಿತ್ರ ಹಾಗೂ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 350 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.